ಇಂಟರ್ನೆಟ್
ಹಾಗು ಕ್ಲೌಡ್ ತಂತ್ರಜ್ಞಾನಗಳ ಸಂಯೋಜನೆಯಿಂದಾಗಿ ರೊಬೋಟಿಕ್ಸ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರೊಬೋಗಳ
ಬಳಕೆ ವ್ಯಾಪಕವಾಗಲಿದೆ ಎಂದು ಬೆಂಗಳೂರಿನ ದಯಾನಂದ್ ಸಾಗರ್ ಇಂಜನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಸಿ.ಮಂಜುನಾಥ್
ಅಭಿಪ್ರಾಯಪಟ್ಟರು.
ಅವರು ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಳೇಶ್ವರಪ್ಪ
ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ವಿಭಾಗದಲ್ಲಿ ಏರ್ಪಡಿಸಿದ್ದ ‘ರೊಬೋಟಿಕ್ಸ್ ಹಾಗು ನಿಯಂತ್ರಣ ವ್ಯವಸ್ಥೆಗಳ ಇತ್ತೀಚಿನ
ಬೆಳವಣಿಗೆಗಳು’ ಕುರಿತ ವಿಶೇಷ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ
ಮಾತನಾಡುತ್ತಿದ್ದರು.
ಬಯೋಮೆಡಿಕಲ್
ಕ್ಷೇತ್ರದ ಸೂಕ್ಷ್ಮಸರ್ಜರಿಯಲ್ಲಿ ರೊಬೋಗಳ ಬಳಕೆಯನ್ನು ವಿವರಿಸಿದ ಅವರು, ಮೈಕ್ರೋರೊಬೋಗಳು ದೇಹದ
ರಕ್ತ ನಾಳಗಳ ಮೂಲಕ ಚಲಿಸಿ ಕೊಲೆಸ್ಟರಾಲ್
ನಿರ್ಮೂಲನೆ ಮಾಡುವ ಹಾಗೂ ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ.
ಸ್ಮಾರ್ಟ್ ಫೋನ್ ಕ್ಷೇತ್ರ ಕ್ಲೌಡ್ ತಂತ್ರಜ್ಞಾನದ ಬಳಕೆಯಿಂದ ಅಸಾಧಾರಣ ಪ್ರಗತಿ ಕಂಡಿದೆ. ಅದೇ
ರೀತಿ ಕ್ಲೌಡ್ ಆಧಾರಿತ ಸ್ವಯಂ ಚಾಲಿತ ವಾಹನಗಳು, ಡ್ರೋನ್ ಗಳು, ರೊಬೋಗಳು ಮುಂಬರುವ ದಿನಗಳಲ್ಲಿ ಸರ್ವೇ
ಸಮಾನ್ಯವಾಗಲಿವೆ ಎಂದು ಅವರು ವಿವರಿಸಿದರು. ,
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಹಿರೇಗೌಡರ್ ಎರ್ರಣ್ಣಗೌಡರ್ ಇವರು
ಕಾರ್ಯಗಾರವನ್ನು ಉದ್ದೇಶಿಸಿ, ಇತ್ತೀಚಿನ ಅವಿಷ್ಕಾರಗಳು ಮಾನವನ ಬದುಕನ್ನೇ
ಬದಲಿಸುತ್ತಿವೆ. ರೋಬೋ ತಂತ್ರಜ್ಞಾನವು ಎಲ್ಲ
ತಾಂತ್ರಿಕ ಕ್ಷೇತ್ರಗಳಲ್ಲೂ ತನ್ನ ಪ್ರಭಾವ ಬೀರುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ
ಆರಂಭದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ|| ಎಸ್.ಎಂ. ಶಶಿಧರ ಪ್ರಾಸ್ತಾವಿಕವಾಗಿ
ಮಾತನಾಡಿದರು. ರೋಬೋ ಹಾಗು ಅಟೋ ಮೆಶನ್ ನಿಂದಾಗಿ ಮಾನವ
ರಹಿತ ಸ್ವಯಂ ಚಾಲಿತ ವ್ಯವಸ್ಥೆಗಳು ಹೆಚ್ಚಲಿವೆ. ತಂತ್ರಾಂಶ ಅಭಿವೃದ್ಧಿಯಲ್ಲೂ ಅಟೋಮೆಶನ್ ಪಾತ್ರ
ಹೆಚ್ಚಲಿದ್ದು ಸಾಫ್ಟ್ ವೇರ್ ಎಂಜಿನಿಯರ್ ಗಳ ಬೇಡಿಕೆಯಲ್ಲಿ ಕುಸಿತವಾಗಲಿದೆ ಎಂದರು.
ಆರಂಭದಲ್ಲಿ ಕು. ಪೂಜಾ ಪ್ರಾರ್ಥಿಸಿದರು.
ಅಧ್ಯಾಪಕ ಕೊಟ್ರೇಶ್ ಸ್ವಾಗತಿಸಿದರು. ಪ್ರೊ. ಅನುಸೂಯ ಪಾಟೀಲ್ ವಂದಿಸಿದರು. ಶಂಬುಲಿಂಗನ ಗೌಡ, ಶಾಂತ ಕುಮಾರ್, ರಾಜಶೇಖರ್ ನಿರ್ವಹಿಸಿದರು.