ಖ್ಯಾತವಿಜ್ಞಾನಿ ಡಾ.ಎಸ್.ಎಂ.ಶಿವಪ್ರಸಾದ್ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ೩೦ರಂದು ನಡೆಯಲಿರುವ ೪ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲಿದೆ.
ಡಾ. ಸೊನ್ನದ ಮಠದ ಶಿವಪ್ರಸಾದ್ ಬೆಂಗಳೂರಿನ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದ ವಸ್ತು-ವಿಜ್ಞಾನ ವಿಭಾಗದಲ್ಲಿ ೨೦೦೭ರಿಂದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುಂಚೆ, ೧೯೮೫ರಿಂದ ೨೦೦೭ರವರೆಗೆ, ಅವರು ನವದೆಹಲಿಯ ರಾಷ್ಟ್ರೀಯ ಭೌತ ವಿಜ್ಞಾನ ಪ್ರಯೋಗಾಲಯದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಸ್ತುಗಳ ಮೇಲ್ಮೈ ವಿಜ್ಞಾನ, ನ್ಯಾನೋ ರಚನೆಗಳು ಹಾಗೂ ಅರೆವಾಹಕಗಳು ಶಿವಪ್ರಸಾದ್ ಅವರ ಸಂಶೋಧನೆಯ ಕ್ಷೇತ್ರಗಳು. ಶಿವಪ್ರಸಾದ್ ಅವರ ಹೆಸರು ಈ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುಪರಿಚಿತ.
ಡಾ.ಎಸ್.ಎಂ.ಶಿವಪ್ರಸಾದ್ ನಾಡಿನ ಪ್ರಸಿದ್ಧ ವಿದ್ವಾಂಸ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಎಸ್.ಎಂ.ವೃಷಭೇಂದ್ರ ಸ್ವಾಮಿಯವರ ಪುತ್ರ. ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿ ಗ್ರಾಮದವರು. ಇವರ ಪೂರ್ವಜರು ಹಗರಿ ಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದಿಂದ ಬಂದು ಎಂ.ಬಿ.ಅಯ್ಯನಹಳ್ಳಿಯಲ್ಲಿ ನೆಲಸಿದರು. ಬಳ್ಳಾರಿಯಲ್ಲಿ ಜನಿಸಿದ ಶಿವಪ್ರಸಾದ್ ಬಾಲ್ಯದ ನಾಲ್ಕೈದು ವರ್ಷಗಳನ್ನು ಅಲ್ಲಿಯೇ ಕಳೆದರು. ಪ್ರಾಥಮಿಕ ಶಿಕ್ಷಣದಿಂದ ಪಿ.ಎಚ್.ಡಿ ಯವರೆಗೆ ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. ದೆಹಲಿಯ ಐಐಟಿಯಲ್ಲಿ ಪೋಸ್ಟ್ -ಡಾಕ್ಟರೇಟ್ ಪೂರೈಸಿದರು.
ಅವರು ೧೬೦ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ೧೦೦ಕ್ಕೂ ಹೆಚ್ಚು ಸೆಮಿನಾರುಗಳಲ್ಲಿ ಭಾಗವಹಿಸಿದ್ದಾರೆ. ಜರ್ಮನಿ, ಅಮೇರಿಕ, ಜಪಾನ್, ಇಂಗ್ಲೆಂಡ್ ಮುಂತಾದ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಸಂಶೋಧಕರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಅವರ ಕೊಡುಗೆಯನ್ನು ಗುರುತಿಸಿ ಅನೇಕ ಪ್ರಶಸ್ತಿ-ಗೌರವಗಳು ಲಭಿಸಿವೆ. ೧೯೯೨ರಲ್ಲಿ ರಾಷ್ಟ್ರಪತಿಗಳಿಂದ ಯುವ ವಿಜ್ಞಾನಿ ಪ್ರಶಸ್ತಿ, ೨೦೦೪ರಲ್ಲಿ ಎನ್.ಪಿ.ಎಲ್. ಅತ್ಯುತ್ತಮ ವಿಜ್ಞಾನಿ ಪ್ರಶಸ್ತಿ ಮುಂತಾದವು.
ವಿದ್ವತ್ ವಲಯಗಳಲ್ಲಿ ಮಾತ್ರವಲ್ಲ, ಮೂಲ ವಿಜ್ಞಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲೂ ಅವರ ಕೊಡುಗೆ ಗಮನಾರ್ಹವಾಗಿದೆ. ಶಾಲಾ, ಕಾಲೇಜುಗಳಲ್ಲಿ ವಿಜ್ಞಾನದ ಕುರಿತು ಭಾಷಣ, ಸಂವಾದ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಅತ್ಯಂತ ಸಂಕೀರ್ಣ ವಿಷಯಗಳನ್ನೂ ಸರಳವಾಗಿ, ಮನಮುಟ್ಟುವಂತೆ ವಿವರಿಸಿ, ವಿದ್ಯಾರ್ಥಿಗಳನ್ನು ವಿಜ್ಞಾನದೆಡೆಗೆ ಆಕರ್ಷಿಸುವ ಕೆಲಸ ಮಾಡಿದ್ದಾರೆ.
ಪಿಯುಸಿಯ ನಂತರ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಅವರಿಗೆ ಲಭ್ಯವಿದ್ದರೂ, ವಿಜ್ಞಾನಿಯಾಗುವ ಗುರಿ, ಆಕಾಂಕ್ಷೆಯಂದ ಬಿ.ಎಸ್ಸಿ. ಆಯ್ದುಕೊಂಡದ್ದು, ಆಗ ಹಲವರ ಹುಬ್ಬೇರಿಸಿತ್ತು. ಅವರ ಯಶಸ್ಸು, ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗಿದೆ. ಮೂಲವಿಜ್ಞಾನ ಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕೆಂಬುದು ಅವರ ಅಭಿಲಾಷೆ. ಎಲ್ಲ ತಾಂತ್ರಿಕ ಅವಿಷ್ಕಾರಗಳ ಹಿಂದೆ ವಿಜ್ಞಾನದ ಸಂಶೋಧನೆಗಳ ಫಲವಿದೆ. ಈಗ ನಾವು ಕಾಣುತ್ತಿರುವ ಎಲ್.ಇ.ಡಿ. ಬಲ್ಬುಗಳ ಕಾರ್ಯ ಕ್ಷಮತೆ ಹೆಚ್ಚುವಲ್ಲಿ ಭೌತ ವಿಜ್ನಾನಿಗಳ ಅವಿರತ ಶ್ರಮವಿದೆ ಎಂದು ಅವರು ಉದಾಹರಿಸುತ್ತಾರೆ.
ಬಳ್ಳಾರಿಯ ಹೆಮ್ಮೆಯ ಸಾಧಕ ಶಿವಪ್ರಸಾದರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ವಿ.ಎಸ್.ಕೆ. ವಿಶ್ವವಿದ್ಯಾನಿಲಯ ಜನಮೆಚ್ಚುಗೆಗೆ ಪಾತ್ರವಾಗಿದೆ.
(This is an article on my cousin Dr.SM Shivaprasad, who is awarded Honorary Doctorate by VSK University, Ballari -SM Shashidhar, HOD)