Friday, October 9, 2015

ಕನಸುಗಳ ಬೆನ್ನು ಹತ್ತಿರಿ

“ಕೀಳರಿಮೆ ತೊಡೆಯಿರಿ; ಕನಸುಗಳ ಬೆನ್ನು ಹತ್ತಿರಿ”
- ವಿದ್ಯಾರ್ಥಿಗಳಿಗೆ  ಶ್ರೀ ನಿರ್ಭಯಾನಂದ ಸ್ವಾಮೀಜಿ ಕರೆ

“ವಿದ್ಯಾರ್ಥಿಗಳು ಕೀಳರಿಮೆ ತೊಡೆದು ಹಾಕಿ, ಉನ್ನತ ಕನಸುಗಳನ್ನು ಸಾಧಿಸುವ ಸಂಕಲ್ಪ ಮಾಡಬೇಕು” ಎಂದು ಗದಗ ವಿವೇಕಾನಂದ ರಾಮಕೃಷ್ಣ ಆಶ್ರಮದ  ಶ್ರೀ ನಿರ್ಭಯಾನಂದ ಸ್ವಾಮೀಜಿ ಕರೆ ನೀಡಿದರು.

ಅವರು ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೆಶ್ವರಪ್ಪ ಎಂಜಿನೀಯರಿಂಗ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
“ಸರಾಸರಿ ಭಾರತೀಯ ವಿದ್ಯಾರ್ಥಿಗಳು, ಇತರ ದೇಶಗಳ ವಿದ್ಯಾರ್ಥಿಗಳಿಗಿಂತ ಹೆಚ್ಚು ಬುದ್ಧಿವಂತರು, ಪರಿಶ್ರಮಿಗಳು,ಮತ್ತು ನಿಷ್ಟೆಯುಳ್ಳವರು ಎಂದು ಅಧ್ಯಯನಗಳು ಹೇಳುತ್ತಿವೆ. ಆದರೆ, ನಮ್ಮ ವಿದ್ಯಾರ್ಥಿಗಳು ಉದ್ಯಮಿಗಳಾಗುವ, ಉದ್ಯಮಗಳ ಮುಖ್ಯಸ್ಥರಾಗುವ ಗುರಿಯಿಟ್ಟುಕೊಳ್ಳದೆ, ಕೇವಲ ಉದ್ಯೋಗ ಗಿಟ್ಟಿಸಿಕೊಳ್ಳುವ ಅಲ್ಪತೃಪ್ತರಾಗಿದ್ದಾರೆ” ಎಂದು ಅವರು ವಿಷಾದಿಸಿದರು.
“ವೇದಗಳ ಕಾಲದಿಂದಲೂ ಭಾರತ ವಿಜ್ಞಾನ-ತಂತ್ರಜ್ಞಾನಗಳ ತವರು ಭೂಮಿ; ನಮ್ಮ ವಂಶವಾಹಿಗಳಲ್ಲೇ ನಮ್ಮ ಪರಂಪರೆ, ಪ್ರತಿಭೆ ಅಡಕವಾಗಿವೆ. ಆದರೆ, ಶೇ. ೮೦ ರಷ್ಟು ಭಾರತೀಯ ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗಕ್ಕೆ ಅನರ್ಹರು ಎಂಬ ಟೀಕೆ ಕಳವಳ ಹುಟ್ಟಿಸಿದೆ. ಕೇವಲ ಅಂಕ ಗಳಿಸುವ ಯಂತ್ರಗಳಾಗದೇ, ಹೊಸ ಅವಿಷ್ಕಾರಗಳತ್ತ ತುಡಿಯಿರಿ. ವಿಶ್ವದ ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರೋಪಾಯಗಳನ್ನು ಶೋಧಿಸಿರಿ” ಎಂದು ಅವರು ಸೂಚಿಸಿದರು. 

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ವಿ.ನಂದೀಶ್, ಹನುಮಂತಪ್ಪ, ವಿವೇಕ ತೋರಣ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಭಾಗವಹಿಸಿದ್ದರು. ಅರಂಭದಲ್ಲಿ ಎಸ್.ಎಂ.ಅಶ್ವಿನಿ ತಂಡದವರು ಪ್ರಾರ್ಥನೆ ಸಲ್ಲಿಸಿದರು.